ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘದಿಂದ ಆಕ್ಷೇಪ, ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಡೆ

09-12-25 08:56 pm       Bangalore Correspondent   ಕರ್ನಾಟಕ

18ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ಹೆಚ್ಚುವರಿ ರಜೆ ನೀಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರು, ಡಿ.9 : 18ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ಹೆಚ್ಚುವರಿ ರಜೆ ನೀಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ಬೆಂಗಳೂರಿನ ಅವಿರತ ಎಎಫ್‌ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಎಂ. ಅವರು ಮಧ್ಯಂತರ ಆದೇಶವನ್ನು ಹೊರಡಿಸಿದರು.

ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್​ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಉಚ್ಚ ನ್ಯಾಯಾಲಯದ ಮುಂದೆ ಇಂದು ಅರ್ಜಿ ವಿಚಾರಣೆಗೆ ಬಂದಿದ್ದು, ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು. 

ಋತುಚಕ್ರ ಸಮಯದಲ್ಲಿ ರಜೆ ನೀಡಲು ಸಂಬಂಧಿತ ಕಾನೂನುಗಳಲ್ಲಿ ಯಾವುದೇ ನಿಬಂಧನೆ ಇಲ್ಲ. ಸರ್ಕಾರವು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ವಿವಿಧ ಸಂಸ್ಥೆಗಳಿಗೆ ಅಧಿಸೂಚನೆಯ ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಅಧಿಕಾರವನ್ನು ಹೊಂದಿಲ್ಲ. ಋತುಚಕ್ರ ರಜೆ ನೀತಿ 2025 ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಮೊದಲು ಸರ್ಕಾರವು ಅರ್ಜಿದಾರರೊಂದಿಗೆ ಅಥವಾ ಇತರ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. 

1948ರ ಕಾರ್ಖಾನೆ ಕಾಯ್ದೆ, 1961ರ ಕರ್ನಾಟಕ ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1951ರ ತೋಟಗಾರಿಕಾ ಕಾಯ್ದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಪರಿಸ್ಥಿತಿಗಳು) ಕಾಯ್ದೆ ಮತ್ತು 1961 ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿ ನೋಂದಾಯಿಸಲಾದ ಸಂಸ್ಥೆಗಳಿಗೆ ಋತುಚಕ್ರದ ರಜೆ ಕಡ್ಡಾಯ ನೀತಿ ತೊಂದರೆಗೀಡು ಮಾಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. 

ಮಹಿಳಾ ಉದ್ಯೋಗಿಗಳು ಆಯಾ ತಿಂಗಳಲ್ಲಿ ಒಂದು ದಿನ ಋತುಚಕ್ರದ ರಜೆಯನ್ನು ಬಳಸಿಕೊಳ್ಳಬೇಕು, ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ. ಅಲ್ಲದೆ, ಈ ರಜೆಯನ್ನು ಪಡೆಯಲು ಮಹಿಳಾ ಉದ್ಯೋಗಿಗಳು ಪ್ರತಿ ತಿಂಗಳು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಡಿ.2ರಂದು ರಾಜ್ಯದ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆ ಮಂಜೂರು ಮಾಡುವಂತೆ ಸರ್ಕಾರ ಆದೇಶಿಸಿತ್ತು.

The Karnataka High Court has issued an interim stay on the state government’s notification mandating one day of menstrual leave per month for women employees aged 18 to 52. The order was challenged by the Bengaluru Hotels Association and AFL Connectivity Systems Ltd., after which Justice Jyoti M. issued notices to the state government.