ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮೀ ನಡಿಗೆ ಕಾರಣಕ್ಕೆ ತಿಂಗಳ ಕಾಲ ಹೊಯ್ದಾಟ, ಖಾಕಿ ಹದ್ದಿನ ಕಣ್ಗಾವಲಿನಲ್ಲಿ ಯಶಸ್ವಿ ರೂಟ್ ಮಾರ್ಚ್, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದುಬಿಟ್ಟ ಸಚಿವ ! 

16-11-25 09:15 pm       HK News Desk   ಕರ್ನಾಟಕ

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಕೊನೆಗೂ ಇಂದು ಯಶಸ್ವಿಯಾಗಿ ನಡೆದಿದೆ. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿ ಭಗವಾಧ್ವಜ ಹಾರಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಒಂದೂವರೆ ಕಿಮೀ ರಸ್ತೆಯುದ್ದಕ್ಕು ಹೆಜ್ಜೆ ಹಾಕಿದರು. 

ಕಲಬುರಗಿ, ನ.16 : ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಕೊನೆಗೂ ಇಂದು ಯಶಸ್ವಿಯಾಗಿ ನಡೆದಿದೆ. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿ ಭಗವಾಧ್ವಜ ಹಾರಿಸಿ ಆರ್‌ಎಸ್‌ಎಸ್ ಕಾರ್ಯಕರ್ತರು ಒಂದೂವರೆ ಕಿಮೀ ರಸ್ತೆಯುದ್ದಕ್ಕು ಹೆಜ್ಜೆ ಹಾಕಿದರು. 

ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ, ಎಚ್‌ಡಿಎಫ್‌ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್‌ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಪಥಸಂಚಲನ ಮುಕ್ತಾಯವಾಯಿತು. ಹೈಕೋರ್ಟ್‌ ಆದೇಶದಂತೆ 300 ಜನ ಗಣವೇಷಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ಗಣವೇಷಧಾರಿಗಳಿಗೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಿದರು. ರಸ್ತೆಯ ಎರಡೂ ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸಿದರು. ಮಧ್ಯಾಹ್ನ 3:45ಕ್ಕೆ ಆರಂಭವಾದ ಪಥ ಸಂಚಲನ 4:22ಕ್ಕೆ ಕೊನೆಗೊಂಡಿತು. ಸುಮಾರು 47 ನಿಮಿಷ ಕಾಲ ಒಟ್ಟು 1.25 ಕಿ.ಮೀ ಉದ್ದಕ್ಕೆ ಮಾರ್ಚ್ ನಡೆಯಿತು. 

ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌, ಕೆಎಸ್‌ಆರ್‌ಪಿ ಡಿಎಆರ್ ತುಕಡಿ ಸೇರಿದಂತೆ 650 ಪೋಲಿಸರು, 250 ಜನ ಹೋಮ್ ಗಾರ್ಡ್ ನಿಯೋಜನೆ ಮಾಡಲಾಗಿತ್ತು. ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಚಿತ್ತಾಪುರ ಹೊರತುಪಡಿಸಿ ಬೇರೆ ಕಡೆಯಿಂದ ಆಗಮಿಸಿದ ಕಾರ್ಯಕರ್ತರಿಗೆ ಪಥಸಂಚಲನದಲ್ಲಿ ಭಾಗಿಯಾಗಲು ಪೊಲೀಸರು ಅವಕಾಶ ನೀಡಲಿಲ್ಲ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ ಖರ್ಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ, ನಮ್ಮಿಂದಾಗಿ ಆರೆಸ್ಸೆಸ್ ಕಾನೂನು ಪ್ರಕಾರ ಅನುಮತಿ ಪಡೆದು ರೂಟ್ ಮಾರ್ಚ್ ನಡೆಸುವಂತಾಯ್ತು. ನೂರು ವರ್ಷದಲ್ಲಿ ಅವರು ಸಂವಿಧಾನ ಪಾಲಿಸಿರಲಿಲ್ಲ. ಈಗ ಕಾನೂನು ಪಾಲನೆ ಮಾಡ್ತಾ ಇದ್ದಾರೆ. ನಾವೇ ಪರ್ಮಿಶನ್ ಕೊಟ್ಟಿದ್ದು. ನಾವೇನು ಆರೆಸ್ಸೆಸ್ ಪಥಸಂಚಲನಕ್ಕೆ ವಿರೋಧ ಮಾಡಿರಲಿಲ್ಲ. ಸಂವಿಧಾನ ಪಾಲನೆ ಮಾಡಲಷ್ಟೇ ಹೇಳಿದ್ದೆವು ಎಂದು ಹೇಳಿ ತನ್ನ ನಡೆಯನ್ನು ಸಮರ್ಥನೆ ಮಾಡಿದ್ದಾರೆ.

The much-debated and highly controversial RSS route march in Chittapur, which had created political tremors across Karnataka, was finally conducted successfully today. In IT/BT Minister Priyank Kharge’s home turf, RSS workers marched for about 1.5 km holding saffron flags.