ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕೆಶಿ ; ಎಲ್ಲ ಸ್ಪರ್ಧಿಗಳು ಜಾಲಿವುಡ್ ಸ್ಟುಡಿಯೋಗೆ ವಾಪಸ್, ಬಿಡದಿಯಲ್ಲಿ ಶೂಟಿಂಗ್ ಮುಂದುವರಿಕೆ ! 

09-10-25 12:57 pm       Bangalore Correspondent   ಕರ್ನಾಟಕ

ಬಿಗ್ ಬಾಸ್ ನಿಲ್ಲಿಸಿದ ಸರ್ಕಾರದ ನಡೆಗೆ ವ್ಯಾಪಕ ಟೀಕೆ, ಡಿಸಿಎಂ ಡಿಕೆಶಿಯಿಂದಾಗಿ ನಿಲ್ಲಿಸಿದ್ದೆಂಬ ಟಾಂಗ್ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಡದಿಯ ಜಾಲಿವುಡ್ ಸ್ಟುಡಿಯೋಕ್ಕೆ ಹಾಕಿದ್ದ ಬೀಗವನ್ನು ತೆರೆಸಿದೆ. ಅಧಿಕಾರಿಗಳು ಬೀಗ ತೆರೆದಿದ್ದು, ಬಿಗ್​​ಬಾಸ್ ಶೂಟಿಂಗ್ ಮುಂದುವರಿಸಲು ಅನುಮತಿ ನೀಡಿದ್ದಾರೆ.

ಬೆಂಗಳೂರು, ಅ.9 : ಬಿಗ್ ಬಾಸ್ ನಿಲ್ಲಿಸಿದ ಸರ್ಕಾರದ ನಡೆಗೆ ವ್ಯಾಪಕ ಟೀಕೆ, ಡಿಸಿಎಂ ಡಿಕೆಶಿಯಿಂದಾಗಿ ನಿಲ್ಲಿಸಿದ್ದೆಂಬ ಟಾಂಗ್ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಡದಿಯ ಜಾಲಿವುಡ್ ಸ್ಟುಡಿಯೋಕ್ಕೆ ಹಾಕಿದ್ದ ಬೀಗವನ್ನು ತೆರೆಸಿದೆ. ಅಧಿಕಾರಿಗಳು ಬೀಗ ತೆರೆದಿದ್ದು, ಬಿಗ್​​ಬಾಸ್ ಶೂಟಿಂಗ್ ಮುಂದುವರಿಸಲು ಅನುಮತಿ ನೀಡಿದ್ದಾರೆ.

ಅಧಿಕಾರಿಗಳು ಬೀಗ ತೆರೆಯುತ್ತಲೇ ಅಲ್ಲಿಯೇ ಪಕ್ಕದಲ್ಲಿ ಇರಿಸಲಾಗಿದ್ದ ಎಲ್ಲ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಮರಳಿದ್ದು, ಆಟವನ್ನು ಮತ್ತೆ ಆರಂಭಿಸಿದ್ದಾರೆ. ಇದೇ ವೇಳೆ ಕಲರ್ಸ್ ಕನ್ನಡ ವಾಹಿನಿಯು ಬಿಗ್​​ಬಾಸ್ ಎಪಿಸೋಡ್​​ ಬಗ್ಗೆ ಪ್ರೋಮೊ ಬಿಡುಗಡೆ ಮಾಡಿದ್ದು, ಬಿಗ್​​ಬಾಸ್ ಶೋ ಎಂದಿನಂತೆ ಮುಂದುವರಿಯುತ್ತದೆ ಎಂದು ಹೇಳಿದೆ. ಪ್ರೋಮೋದಲ್ಲಿ ಖಾಲಿ ಇರುವ ಬೆಡ್ ರೂಂ, ಕಿಚನ್, ಲಿವಿಂಗ್ ರೂಂ, ಹೊರಗಡೆಯ ಏರಿಯಾಗಳನ್ನು ತೋರಿಸಲಾಗಿದ್ದು, ಕೊನೆಯಲ್ಲಿ ‘ಎಂದಿನಂತೆ ಅದೇ ಸಮಯದಲ್ಲಿ, ಬಿಗ್​​ಬಾಸ್ ಕನ್ನಡ ರಾತ್ರಿ 9:30ಕ್ಕೆ ಪ್ರಸಾರ ಎಂದು ಖಡಕ್ ಧ್ವನಿಯಲ್ಲಿ ತಿಳಿಸಲಾಗಿದೆ. 

ನಟ್, ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದ ಡಿಕೆಶಿ 

ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಇಂಡಸ್ಟ್ರಿಯ ನಟ್, ಬೋಲ್ಟ್ ಟೈಟ್ ಮಾಡಿಸ್ತೀನಿ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ನಾವೂ ನಟ್, ಬೋಲ್ಟ್ ನೋಡಿಕೊಳ್ತೀವಿ ಎಂದು ಟಾಂಗ್ ನೀಡಿದ್ದರು. ನಿನ್ನೆ ಬಿಗ್ ಬಾಸ್ ಮನೆಯ ತ್ಯಾಜ್ಯವನ್ನು ಹಾಗೇ ಹೊರಕ್ಕೆ ಬಿಡಲಾಗುತ್ತಿದೆ ಎಂಬ ಕ್ಷುಲ್ಲಕ ವಿಚಾರ ಮುಂದಿಟ್ಟು ಶೋ ನಡೆಯುತ್ತಿದ್ದ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಜೆಡಿಎಸ್, ಬಿಜೆಪಿ ನಾಯಕರು, ಇದಕ್ಕೆ ಡಿಕೆಶಿ ಅವರೇ ಕಾರಣ ಎಂದು ಟೀಕೆ ಮಾಡಿದ್ದರು. ಸುದೀಪ್ ಮೇಲಿನ ಕೋಪದಲ್ಲಿ ಬಿಗ್ ಬಾಸ್ ನಿಲ್ಲಿಸಿದ್ದಾರೆಂದು ಹೇಳಿದ್ದರು. 

ಬೀಗ ಓಪನ್ ಮಾಡಲು ಡಿಸಿಗೆ ಸೂಚಿಸಿದ ಡಿಕೆಶಿ 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್‌ ನಡೆಯುವ ಜಾಲಿವುಡ್‌ ಸ್ಟುಡಿಯೋ ಬಂದ್‌ ಮಾಡಲಾಗಿದೆ. ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಇದಾಗುತ್ತಲೇ
ನಿನ್ನೆ ರಾತ್ರಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಡಿಕೆಶಿಯನ್ನು ಭೇಟಿಯಾಗಿದ್ದು ಓಪನ್ ಮಾಡಲು ಮನವಿ ನೀಡಿದ್ದಾರೆ. ಈ ವೇಳೆ ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋರ್ಟ್ ವಿಚಾರ ಕೋರ್ಟ್‌ನಲ್ಲೇ ನಡೆಯಲಿ. ಆದರೆ ಜಾಲಿವುಡ್ ಸಿಬ್ಬಂದಿಗೆ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಕೊಡದಷ್ಟು ಉದ್ದಟತನ ತೋರಿದ್ದಾರೆ ಎಂದು ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದಕ್ಕೆ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತಾರೆ. ಬಿಗ್‌ಬಾಸ್‌ನಂತಹ ದೊಡ್ಡ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಬೇಡ ಎಂದು ಡಿಕೆಶಿ ಮನವೊಲಿಕೆ ಮಾಡಿದ್ದಾರೆ. ಮನವೊಲಿಕೆಯ ಬೆನ್ನಲ್ಲೇ ನೀವೇ ತೀರ್ಮಾನ ಮಾಡಿ ಎಂದು ಡಿಕೆಶಿಗೆ ನರೇಂದ್ರ ಸ್ವಾಮಿ ಹೇಳಿದ್ದು ಕೊನೆಗೆ ಡಿಕೆಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಾಲಿವುಡ್‌ ಸ್ಟುಡಿಯೋದಲ್ಲಿರುವ ಬಿಗ್‌ ಬಾಸ್‌ ಮನೆಯನ್ನು ಓಪನ್ ಮಾಡಲು ಸೂಚನೆ ನೀಡಿದ್ದಾರೆ.

Following widespread criticism over the suspension of the Bigg Boss Kannada show, the Karnataka government has reopened the Jalewood Studio in Bidadi, allowing the shooting to resume. Authorities unlocked the premises on Wednesday, enabling all 17 contestants to return to the Bigg Boss house and restart the game.