ಪಹಲ್ಗಾಮ್ ಮಾದರಿಯಲ್ಲೇ ಮುಂಬೈನಲ್ಲಿ ದಾಳಿ ; ಕಲ್ಮಾ ಪಠಿಸಲು ನಿರಾಕರಿಸಿದ್ದಕ್ಕೆ ಇಬ್ಬರು ಭದ್ರತಾ ಸಿಬ್ಬಂದಿಗೆ ಚಾಕು ಇರಿತ, ಅಮೆರಿಕದಿಂದ ಬಂದು ಉಗ್ರವಾದ ತಲೆಗೆ ಮೆತ್ತಿಕೊಂಡಿದ್ದ ಜುಬೇರ್ !

29-04-26 02:46 pm       HK News Staffer   ಕ್ರೈಂ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮಾದರಿಯಲ್ಲೇ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಇಬ್ಬರು ಭದ್ರತಾ ಸಿಬಂದಿಯನ್ನು ಕಲ್ಮಾ ಪಠಿಸಲು ಒತ್ತಾಯಿಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು ಶಂಕಿತ ಐಸಿಸ್ ಪ್ರೇರಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ, ಎಪ್ರಿಲ್ 29: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮಾದರಿಯಲ್ಲೇ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಇಬ್ಬರು ಭದ್ರತಾ ಸಿಬಂದಿಯನ್ನು ಕಲ್ಮಾ ಪಠಿಸಲು ಒತ್ತಾಯಿಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು ಶಂಕಿತ ಐಸಿಸ್ ಪ್ರೇರಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. 

ಕಲ್ಮಾ ಪಠಿಸಲು ಒಪ್ಪದ ಇಬ್ಬರು ಭದ್ರತಾ ಸಿಬ್ಬಂದಿಗೆ ಜೈಬ್ ಜುಬೇರ್ ಅನ್ಸಾರಿ ಎಂಬಾತ ಚಾಕು ಇರಿದಿದ್ದಾನೆ. ಆರೋಪಿ ಜುಬೇರ್ ಸ್ನಾತಕೋತ್ತರ ಪದವಿಧರನಾಗಿದ್ದು ಸರಿಯಾದ ಕೆಲಸ ಸಿಗದೆ ಐಸಿಸ್ ನೆಟ್ವರ್ಕ್ ನಿಂದ ಪ್ರೇರಿತನಾಗಿ ಮೂಲಭೂತವಾದ ತಲೆಗೆ ಹತ್ತಿಸಿಕೊಂಡಿದ್ದ ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸೋಮವಾರ ನಸುಕಿನ ಜಾವ 4 ಗಂಟೆ ವೇಳೆಗೆ ಥಾಣೆ ಜಿಲ್ಲೆಯ ಮೀರಾ ಭಯಂದರ್ ಪ್ರದೇಶದಲ್ಲಿ ಘಟನೆ ನಡೆದಿದೆ. 

ಭದ್ರತಾ ಕೆಲಸ ನಿರ್ವಹಿಸುತ್ತಿದ್ದ ರಾಜ್ ಕುಮಾ‌ರ್ ಮಿಶ್ರಾ ಹಾಗೂ ಸುಬ್ರತೋ ಸೇನ್ ಅವರ ಬಳಿ ಆಗಮಿಸಿದ ಆರೋಪಿ ಜೈಬ್ ಜುಬೇರ್ ಅನ್ಸಾರಿ, ಇಸ್ಲಾಂನ ಕಲ್ಮಾ ಪಠಿಸುವಂತೆ ಒತ್ತಾಯಿಸಿದ್ದಾನೆ. ಕಲ್ಮಾ ಪಠಿಸಲು ಒಪ್ಪದಿದ್ದಾಗ ಇಬ್ಬರಿಗೂ ಮನ ಬಂದಂತೆ ಚಾಕು ಇರಿದಿದ್ದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಭದ್ರತಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಘಟನೆ ಬೆನ್ನಲ್ಲೇ ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, 90 ನಿಮಿಷದಲ್ಲಿ ಆರೋಪಿ ಜುಬೇರ್ ನನ್ನು ಬಂಧಿಸಿದ್ದಾರೆ. ‌ಅಲ್ಲದೆ, ಆತನ ಬಳಿಯಿದ್ದ ಮೊಬೈಲ್, ಇಲೆಕ್ಟ್ರಾನಿಕ್ ಉಪಕರಣ, ಡೈರಿ ಮತ್ತಿತರ ಧಾರ್ಮಿಕ ಪ್ರಚೋದನೆಯ ಬರಹಗಳ ಪುಸ್ತಕಗಳನ್ನು ವಶಪಡಿಸಿದ್ದಾರೆ.

ಡೈರಿಯಲ್ಲಿ ಉಗ್ರ ನಂಟು ಸುಳಿವು 

ಬಂಧಿತ ಆರೋಪಿಯಿಂದ ವಶಪಡಿಸಿಕೊಂಡ ಡೈರಿಯಲ್ಲಿ ಉಗ್ರರ ನಂಟಿನ ಸುಳಿವು ಲಭಿಸಿದೆ. ಜಿಹಾದ್, ಗಾಜಾ, ಒಂಟಿ ತೋಳ ಪದಗಳನ್ನು ಡೈರಿಯಲ್ಲಿ ಉಲ್ಲೇಖಿಸಿದ್ದು, “ಒಂಟಿ ತೋಳಗಳು ನಿಮ್ಮ ಮೇಲೆ ದಾಳಿ ಮಾಡುತ್ತವೆ. ಇನ್ನು ಮುಂದೆ ಬಿಲಾದ್ ಹಿಂದ್‌ನಲ್ಲಿ ನಿಜವಾದ ಜಿಹಾದ್ ನೋಡುತ್ತೀರಿ'' ಎಂಬ ರೀತಿಯ ಒಕ್ಕಣೆಗಳನ್ನು ಬರೆಯಲಾಗಿದೆ. ಗಾಜಾದಲ್ಲಿ ನಡೆದಿರುವ ಜನರ ಸಾವು ಉಲ್ಲೇಖಿಸಿ ದ್ವೇಷದ ಸಾಲುಗಳನ್ನು ಪದೇ ಪದೆ ಬರೆದಿರುವುದು ಪತ್ತೆಯಾಗಿದೆ. 

ಆರೋಪಿ ಮನೆಯಲ್ಲಿ ವಶಪಡಿಸಿಕೊಳ್ಳಲಾದ ಸಂಶಯಾಸ್ಪದ ವಸ್ತುಗಳನ್ನು ಉಗ್ರ ನಿಗ್ರಹ ದಳದ (ಎಟಿಎಸ್) ಸುಪರ್ದಿಗೆ ನೀಡಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಣತರು ಆರೋಪಿಯ ಡಿಜಿಟಲ್ ಫುಟ್ ಪ್ರಿಂಟ್, ಮೊಬೈಲ್ ದತ್ತಾಂಶ, ಅಂತರ್ಜಾಲದ ಬ್ರೌಸಿಂಗ್ ಇತಿಹಾಸ, ಸಂವಹನ ಸಂಪರ್ಕದ, ಪ್ರಯಾಣದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.‌ ಚಾಕು ಇರಿತ ಘಟನೆ ಸಂಬಂಧ ಆರೋಪಿ ಮೇಲೆ ಬಿಎನ್‌ಎಸ್ ಕಾಯಿದೆ ಸೆಕ್ಷನ್ 196 (1) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಧರ್ಮ ನಿಂದನೆ, ಜನಾಂಗೀಯ ದ್ವೇಷ ಬಿತ್ತಲು ಯತ್ನಿಸಿದ ಆರೋಪ ಹೊರಿಸಲಾಗಿದೆ. 

ಅಮೆರಿಕದಿಂದ ಬಂದಿದ್ದ ಜುಬೇರ್ 

ಆರೋಪಿ ಜೈಬ್ ಜುಬೇರ್ ಅನ್ಸಾರಿ ತನ್ನ ಕುಟುಂಬದೊಂದಿಗೆ ಈ ಹಿಂದೆ ಅಮೆರಿಕದಲ್ಲಿ ನೆಲೆಸಿದ್ದ. ರಸಾಯನಶಾಸ್ತ್ರವಿಷಯದಲ್ಲಿ ಪದವಿ ಪಡೆದಿದ್ದು ಎಲ್ಲಿಯೂ ಕೆಲಸ ಸಿಗದೆ 2019ರಲ್ಲಿ ಭಾರತಕ್ಕೆ ಮರಳಿದ್ದ. ಕೆಲವು ಶಿಕ್ಷಣ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಆನ್ ಲೈನ್ ತರಗತಿ ನಡೆಸುತ್ತಿದ್ದ. ಮೀರಾ ಭಯಂದರ್ ರಸ್ತೆಯ ಸ್ಮಿತಾ ರೀಜೆನ್ಸಿ ಅಪಾರ್ಟ್‌ ಮೆಂಟ್‌ನ ಮನೆಯೊಂದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಪೋಸ್ಟ್‌ಗಳು ಅನ್ಸಾರಿ ಮೂಲಭೂತವಾದಿಯಾಗಿದ್ದ ಎಂಬುದನ್ನು ಸೂಚಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಜತೆಗಿದ್ದ ಅಫಘಾನಿಸ್ತಾನ ಮೂಲದ ಪತ್ನಿ ಇತ್ತೀಚೆಗೆ ಭಾರತ ತೊರೆದು ಅಮೆರಿಕಕ್ಕೆ ತೆರಳಿದ್ದಳು ಎಂದು ತಿಳಿದುಬಂದಿದೆ.