ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆ !

22-12-25 02:18 pm       HK News Desk   ಕ್ರೈಂ

ಅಂತರ್ಜಾತಿ ಯುವಕನನ್ನು ಪ್ರೀತಿಸಿ, ವಿವಾಹವಾಗಿದ್ದ ಮಗಳನ್ನು ತಂದೆಯೇ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿರುವ ಮರ್ಯಾದಾ ಪ್ರಕರಣ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ.

ಹುಬ್ಬಳ್ಳಿ, ಡಿ 22 : ಅಂತರ್ಜಾತಿ ಯುವಕನನ್ನು ಪ್ರೀತಿಸಿ, ವಿವಾಹವಾಗಿದ್ದ ಮಗಳನ್ನು ತಂದೆಯೇ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿರುವ ಮರ್ಯಾದಾ ಪ್ರಕರಣ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ.

ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯ ಪಾಟೀಲ (19) ಕೊಲೆಗೀಡಾದ ಗರ್ಭಿಣಿ. ಯುವತಿಯ ತಂದೆ ಪ್ರಕಾಶ ಗೌಡ ಪಾಟೀಲ, ಚಿಕ್ಕಪ್ಪ ವೀರನಗೌಡ ಹಾಗೂ ಸಹೋದರ ಅರುಣ್ ಗೌಡ ಕೊಲೆ ಮಾಡಿರುವ ಆರೋಪಿಗಳು. ಮಾರಕಾಸ್ತ್ರಗಳಿಂದ ಭೀಕರ ದಾಳಿ ಮಾಡಿದ್ದರಿಂದ ಗಂಭೀರ ಗಾಯಗೊಂಡಿದ್ದ ಮಾನ್ಯ ಕೊನೆಯುಸಿರೆಳೆದಿದ್ದಾರೆ. ಮಾನವ ಕುಲವೇ ತಲೆತಗ್ಗಿಸುವಂತಹ ಅಮಾನುಷ ಕೃತ್ಯಕ್ಕೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

​ಮಾನ್ಯ ಪಾಟೀಲ ಇನಾಂವೀರಾಪುರ ಗ್ರಾಮದ ದಲಿತ ಸಮುದಾಯದ ಯುವಕ ವಿವೇಕಾನಂದ ದೊಡ್ಡಮನಿ ಎಂಬಾತನನ್ನು ಪ್ರೀತಿಸಿದ್ದಳು. ಈ ಮದುವೆಗೆ ಮೇಲ್ವರ್ಗಕ್ಕೆ ಸೇರಿದ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲಿ ನಡೆದ ರಾಜಿ ಪಂಚಾಯಿತಿಯ ಬಳಿಕ ಏಳು ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ನಂತರ ಪ್ರಾಣ ಭಯದಿಂದ ಹಾವೇರಿ ಜಿಲ್ಲೆಯಲ್ಲಿ ನೆಲೆಸಿದ್ದ ದಂಪತಿ, ಡಿಸೆಂಬರ್​​ 8ರಂದು ಊರಿಗೆ ಮರಳಿದ್ದರು. ಆದರೆ, ವೈರತ್ವದ ಕಿಚ್ಚು ಹಚ್ಚಿಕೊಂಡಿದ್ದ ಯುವತಿಯ ತಂದೆ, ಚಿಕ್ಕಪ್ಪ ಹಾಗೂ ಸಹೋದರ ಭಾನುವಾರ ಸಂಜೆ ವಿವೇಕಾನಂದನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಮಾನ್ಯಳನ್ನು ರಕ್ಷಿಸಲು ಬಂದ ವಿವೇಕಾನಂದನ ಮನೆಯವರ ಮೇಲೂ ಮನಬಂದಂತೆ ಹಲ್ಲೆ ನಡೆಸಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿ ಮಾನ್ಯ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಇತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣದಲ್ಲಿ ಯುವತಿಯ ತಂದೆ ಪ್ರಕಾಶ ಗೌಡ ಪಾಟೀಲ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A shocking case of honour killing has been reported from Inamveerapur village in Hubballi taluk, where a father brutally murdered his 19-year-old pregnant daughter for marrying a man from a different caste.