ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ; ಅಧ್ಯಕ್ಷ - ಸಿಇಓರಿಂದಲೇ ಮೋಸ, ಅಡವಿಟ್ಟ ಆಭರಣಗಳೇ ಮಾಯ! ಠೇವಣಿದಾರರ 30 ಕೋಟಿ ಹಣ ಗುಳುಂ, ಎಸ್ಪಿ-ಐಜಿಪಿಗೆ ದೂರಿತ್ತರೂ ನಿರ್ಲಕ್ಷ್ಯ! 

11-11-25 06:33 pm       Mangalore Correspondent   ಕ್ರೈಂ

ರಾಮ ಕ್ಷತ್ರಿಯ ಸಮಾಜಕ್ಕೆ ಒಳಪಟ್ಟ ಬೆಳ್ತಂಗಡಿ ಪೇಟೆಯಲ್ಲಿ ಕಳೆದ 28 ವರ್ಷಗಳಿಂದ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರೇ 30 ಕೋಟಿಗೂ ಹೆಚ್ಚು ಠೇವಣಿದಾರರ ಹಣವನ್ನು ದುರುಪಯೋಗ ಮಾಡುವ ಮೂಲಕ ಗುಳುಂ ಮಾಡಿದ್ದಾರೆಂದು ಸೊಸೈಟಿ ನಿರ್ದೇಶಕರೇ ಆರೋಪ ಮಾಡಿದ್ದಾರೆ.

ಮಂಗಳೂರು, ನ.11 : ರಾಮ ಕ್ಷತ್ರಿಯ ಸಮಾಜಕ್ಕೆ ಒಳಪಟ್ಟ ಬೆಳ್ತಂಗಡಿ ಪೇಟೆಯಲ್ಲಿ ಕಳೆದ 28 ವರ್ಷಗಳಿಂದ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಸೊಸೈಟಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅವರೇ 30 ಕೋಟಿಗೂ ಹೆಚ್ಚು ಠೇವಣಿದಾರರ ಹಣವನ್ನು ದುರುಪಯೋಗ ಮಾಡುವ ಮೂಲಕ ಗುಳುಂ ಮಾಡಿದ್ದಾರೆಂದು ಸೊಸೈಟಿ ನಿರ್ದೇಶಕರೇ ಆರೋಪ ಮಾಡಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶ್ರೀರಾಮ ಕ್ರೆಡಿಟ್ ಸೊಸೈಟಿಯ ಸಂತ್ರಸ್ತ ನಿರ್ದೇಶಕರ ಸಮಿತಿಯ ವಿಶ್ವನಾಥ ಬಿ, ಪ್ರಮೋದ್ ಆರ್. ನಾಯಕ್, ಕಿಶೋರ್ ಕುಮಾರ್, ನಯನ ಶಿವಪ್ರಸಾದ್, ಸದಾನಂದ ಮಾಸ್ಟರ್ ಸುದ್ದಿಗೋಷ್ಟಿ ನಡೆಸಿದ್ದು ತಾವು ಸೊಸೈಟಿ ನಿರ್ದೇಶಕರಾಗಿದ್ದರೂ ತಮ್ಮ ಗಮನಕ್ಕೆ ಬಾರದಂತೆ ಅಧ್ಯಕ್ಷ ಸಿ.ಎಚ್ ಪ್ರಭಾಕರ್ ಮತ್ತು ಕಾರ್ಯದರ್ಶಿ ಚಂದ್ರಕಾಂತ ಬಿ. ಅವರು ಹಣವನ್ನು ದುರುಪಯೋಗ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಒಂದು ವರ್ಷದ ಹಿಂದೆ ಅಂದರೆ, 2024ರ ಸೆಪ್ಟಂಬರ್ ನಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಎಫ್ಐಆರ್ ದಾಖಲು ಮಾಡಿಲ್ಲ. ಠೇವಣಿ ಹಣವನ್ನು ಕಳಕೊಂಡ 50ಕ್ಕೂ ಹೆಚ್ಚು ಮಂದಿ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಿದ್ದು ಸೊಸೈಟಿ ನಿರ್ದೇಶಕರನ್ನೆಲ್ಲ ಆರೋಪಿಗಳನ್ನಾಗಿ ಮಾಡಿದ್ದಾರೆ. ಆದರೆ ಈ ಅವ್ಯವಹಾರದಲ್ಲಿ ತಮ್ಮ ಪಾತ್ರ ಇಲ್ಲ. ನಾವು ಯಾವುದೇ ರೀತಿಯ ತನಿಖೆಗೂ ಸಿದ್ಧರಿದ್ದೇವೆ, ಕಳೆದ ಮೂರು ವರ್ಷಗಳಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

2021-22ರಲ್ಲಿ ಹೊಸ ಕಮಿಟಿ ಅಸ್ತಿತ್ವಕ್ಕೆ ಬಂದಿದ್ದು ಸಿಎಚ್ ಪ್ರಭಾಕರ್ ಅಧ್ಯಕ್ಷರಾಗಿ ಮತ್ತು ಚಂದ್ರಕಾಂತ್ ಅವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದರು. ಪ್ರಭಾಕರ್ ಅವರು ಸಂಸ್ಥೆಯ ಆರಂಭದಿಂದಲೂ (1998) ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿದ್ದು 2021 ಫೆಬ್ರವರಿಯಿಂದ ಅಧ್ಯಕ್ಷರಾಗಿದ್ದಾರೆ. ಪ್ರತಿ ವರ್ಷ ಮಹಾಸಭೆಯಲ್ಲಿ ಸೊಸೈಟಿ ಲಾಭದಲ್ಲಿದೆಯೆಂದು ಹೇಳಿ ಸದಸ್ಯರನ್ನು ನಂಬಿಸಿಕೊಂಡು ಬಂದಿದ್ದಾರೆ. 2024ರ ಸೆಪ್ಟಂಬರ್ ತಿಂಗಳಲ್ಲಿ ನಿರ್ದೇಶಕರಲ್ಲಿ ಒಬ್ಬರಾದ ವಿಶ್ವನಾಥ ಅವರು, ತಾವು ಠೇವಣಿ ಇಟ್ಟಿದ್ದ ಒಂದು ಕೋಟಿ ರೂ.ವನ್ನು ಹಿಂಪಡೆಯಲು ವಿಚಾರಿಸಿದಾಗ ಬ್ಯಾಂಕಿನಲ್ಲಿ ಹಣ ಇಲ್ಲದಿರುವುದು ತಿಳಿದುಬಂದಿತ್ತು.

ಇದರಂತೆ, ಅಧ್ಯಕ್ಷರು ಮತ್ತು ಸಿಇಓ ಅವರನ್ನು ಪ್ರಶ್ನಿಸಿದಾಗ ಪರಸ್ಪರ ಕೈತೋರಿಸಲು ಯತ್ನಿಸಿದ್ದಲ್ಲದೆ, ಸಮಂಜಸ ಉತ್ತರ ನೀಡಿರುವುದಿಲ್ಲ. ಸದಸ್ಯರು, ನಿರ್ದೇಶಕರು ಆಕ್ಷೇಪಿಸಿದ್ದರಿಂದ ಅಧ್ಯಕ್ಷ ಸಿ.ಎಚ್ ಪ್ರಭಾಕರ್ ಅವರು ತುರ್ತು ಸಭೆ ನಡೆಸಿ, ಚಂದ್ರಕಾಂತ ಅವರನ್ನು ಅಮಾನತುಪಡಿಸಿ ಅನ್ವಿತ್ ಎಂಬವರನ್ನು ಹೊಸ ಸಿಇಓ ಆಗಿ ನೇಮಿಸಿದ್ದರು. ಆದರೆ 2024ರ ಅ.2ರಂದು ರಾತ್ರಿ ವೇಳೆ ಅನ್ವಿತ್, ಸಿಎಚ್ ಪ್ರಭಾಕರ್, ವಕೀಲ ಕೃಷ್ಣ ಶೆಣೈ, ಪ್ರಭಾಕರ್ ಅಳಿಯ ಗೌತಮ್, ಅಡಿಟರ್ ತುಕಾರಾಮ ಎಂಬವರು ಸೇರಿ ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸಿ ಅವ್ಯವಹಾರದ ದಾಖಲೆಗಳನ್ನು ಅಳಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಸಹಕಾರ ಇಲಾಖೆಯ ತನಿಖೆಯ ಸಂದರ್ಭದಲ್ಲಿ ಅನ್ವಿತ್ ಕಲಂ 64ರಡಿಯಲ್ಲಿ ಹೇಳಿಕೆ ನೀಡಿರುತ್ತಾರೆ.

ತನಿಖೆಯ ಸಂದರ್ಭದಲ್ಲಿ ಸೊಸೈಟಿ ನಿರ್ದೇಶಕರದ್ದೇ ಒಂದೂವರೆ ಕೋಟಿ ದುಡ್ಡು ಮಾಯವಾಗಿದ್ದು, ಹಲವಾರು ಸದಸ್ಯರು ಇಟ್ಟಿರುವ ಕೋಟ್ಯಂತರ ರೂಪಾಯಿ ಹಣವನ್ನು ನುಂಗಿ ಹಾಕಿರುವುದು ಪತ್ತೆಯಾಗಿದೆ. ಸಿಎಚ್ ಪ್ರಭಾಕರ್ ಅವರು ತಮ್ಮ ಸಂಬಂಧಿಕರಿಗೆ ಯಾವುದೇ ದಾಖಲೆ ಇಲ್ಲದೆ, ಸಾಲವನ್ನು ಕೊಟ್ಟಿರುವ ಮಾಹಿತಿ ಇದೆ. ಇದಲ್ಲದೆ, ಚಿನ್ನವನ್ನು ಪಡೆಯದೆ ಚಿನ್ನದ ಸಾಲ ಎಂದು ನೀಡಿರುವುದು ಸಿಬಂದಿ ಮೂಲಕ ತಿಳಿದುಬಂದಿದೆ. ಇಂತಹ ಅವ್ಯವಹಾರ, ಮೋಸ ನಡೆದಿದ್ದರೂ ನಾವು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮತ್ತು ಜಿಲ್ಲಾ ಎಸ್ಪಿ ಅವರನ್ನು ಭೇಟಿಯಾಗಿ ದೂರಿತ್ತರೂ ತನಿಖೆ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತ ನಿರ್ದೇಶಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆಭರಣ ಸಾಲ 70 ಪ್ರಕರಣಗಳಿದ್ದು, 2.21 ಕೋಟಿ ಸಾಲ ನೀಡಿರುವುದಾಗಿ ಲೆಕ್ಕಪತ್ರಗಳಲ್ಲಿ ನಮೂದಾಗಿದೆ. ಆದರೆ ಸಂಘದಲ್ಲಿ ಯಾವುದೇ ಆಭರಣಗಳು ಲಭ್ಯ ಇರುವುದಿಲ್ಲ ಎಂದು ಅಡಿಟ್ ವರದಿಯಲ್ಲಿ ತಿಳಿಸಲಾಗಿದೆ. ಸಹಕಾರ ಇಲಾಖೆಯ ಅಧಿಕಾರಿಗಳು ಲೆಕ್ಕ ಪರಿಶೋಧಕರ ವರದಿಯ ಆಧಾರದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ತಿಳಿಸಿದ್ದಾರೆ. ಇದರ ಬಗ್ಗೆ ಪಶ್ಚಿಮ ವಲಯ ಐಜಿಪಿ ಅವರಿಗೂ ದೂರು ನೀಡಿದ್ದೇವೆ. ಯಾರು ತಪ್ಪು ಮಾಡಿದ್ದಾರೆಂದು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ನಿರ್ದೇಶಕರು ಆಗ್ರಹಿಸಿದ್ದಾರೆ.

A massive financial scam has rocked the Shriram Credit Cooperative Society in Belthangady, Mangaluru, where the society’s own president C.H. Prabhakar and CEO Chandrakant B. have been accused of misusing over ₹30 crore of depositors’ money. According to the society’s directors, gold pledged as collateral for loans has vanished, and financial records were allegedly tampered with after CCTV systems were disabled.