ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕನ್ನ ; 47 ಕೋಟಿ ರೂ. ವಂಚನೆ, 600ಕ್ಕೂ ಅಧಿಕ‌ ಖಾತೆಗಳಿಗೆ ಹಣ ವರ್ಗಾವಣೆ, ಇಬ್ಬರು ಸಿಸಿಬಿ ಬಲೆಗೆ 

27-10-25 04:04 pm       Bangalore Correspondent   ಕ್ರೈಂ

ಫೈನಾನ್ಸ್ ಕಂಪನಿಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ (API) ಗೇಟ್‌ವೇ ಬ್ರೀಚ್ ಮಾಡಿ, 47 ಕೋಟಿ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಉದಯಪುರ ಮೂಲದ ಸಂಜಯ್ ಪಟೇಲ್ ಹಾಗೂ ಬೆಳಗಾವಿ ಮೂಲದ ಇಸ್ಮಾಯಿಲ್ ರಶೀದ್ ಅತ್ತರ್ ಬಂಧಿತರು.

ಬೆಂಗಳೂರು, ಅ 27 : ಫೈನಾನ್ಸ್ ಕಂಪನಿಯ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್ (API) ಗೇಟ್‌ವೇ ಬ್ರೀಚ್ ಮಾಡಿ, 47 ಕೋಟಿ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಉದಯಪುರ ಮೂಲದ ಸಂಜಯ್ ಪಟೇಲ್ ಹಾಗೂ ಬೆಳಗಾವಿ ಮೂಲದ ಇಸ್ಮಾಯಿಲ್ ರಶೀದ್ ಅತ್ತರ್ ಬಂಧಿತರು.

ವಂಚನೆಗೆ ಬಳಸಲಾಗಿದ್ದ 600ಕ್ಕೂ ಅಧಿಕ‌ ಖಾತೆಗಳನ್ನು ಫ್ರೀಜ್ ಮಾಡಿಸಲಾಗಿದ್ದು, ಇದುವರೆಗೂ 10 ಕೋಟಿ ರೂ ಹಣ ಹಿಂಪಡೆಯಲಾಗಿದೆ. ದುಬೈನಲ್ಲಿ ಕುಳಿತು ವಂಚನೆಯ ಜಾಲ ನಡೆಸುತ್ತಿದ್ದ ಭಾರತೀಯ‌ ಮೂಲದ ಇನ್ನಿಬ್ಬರು ಆರೋಪಿಗಳ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆಗಾಗಿ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಬಳಸಿದ್ದ ಆರೋಪಿಗಳು, ಫೈನಾನ್ಸ್ ಕಂಪನಿಯ ಅಪ್ಲಿಕೇಶನ್‌ನ ಎಪಿಐ ಗೇಟ್‌ವೇ ಬ್ರೀಚ್ ಮಾಡಿದ್ದರು. ಈ ಕೃತ್ಯಕ್ಕಾಗಿ ಹಾಂಕಾಂಗ್, ಫಿಲಿಫೈನ್ಸ್ ಮೂಲದ ಹ್ಯಾಕರ್ಸ್‌ಗಳನ್ನು ಬಳಸಿಕೊಂಡಿದ್ದರು. ಎಪಿಐ ಗೇಟ್‌ವೇ ಬ್ರೀಚ್ ಮಾಡಿದ ಬಳಿಕ ಕಂಪನಿಯ ಖಾತೆಯಿಂದ ಸುಮಾರು 3 ಸಾವಿರ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದರು. ನಂತರ ಆ ಹಣ ವಂಚಕರ ಖಾತೆಗಳಿಗೆ ಜಮೆಯಾಗಿತ್ತು.

ವಂಚನೆಯ ಜಾಡು ಬೆನ್ನತ್ತಿದ್ದ ಸೈಬರ್ ಕ್ರೈಂ ಪೊಲೀಸರು ಐಪಿ ಅಡ್ರೆಸ್‌ಗಳು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳನ್ನು ಆಧರಿಸಿ ಸಂಜಯ್ ಪಟೇಲ್ ಹಾಗೂ ಇಸ್ಮಾಯಿಲ್ ರಶೀದ್ ಅತ್ತರ್​ನನ್ನು ಬಂಧಿಸಿದ್ದಾರೆ. ದುಬೈನಲ್ಲಿರುವ ವಂಚಕರ ತಂಡದೊಂದಿಗೆ ಇಸ್ಮಾಯಿಲ್ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರತ್ ಹಳ್ಳಿ ಔಟರ್ ರಿಂಗ್ ರಸ್ತೆಯಲ್ಲಿರುವ ಬೆಂಗಳೂರು ಮೂಲದ ಫೈನಾನ್ಸ್ ಕಂಪನಿಯ ಖಾತೆಗಳಿಗೆ ಕನ್ನ ಹಾಕಲಾಗಿತ್ತು. ಆಗಸ್ಟ್ 6 ಮತ್ತು 7ರಂದು ಕಂಪನಿಯ ಅನುಮತಿ ಇಲ್ಲದೇ ಕೆಲವು ಖಾತೆಗಳಿಗೆ ಅನಿಯಮಿತ ಮತ್ತು ಅನುಮಾನಾಸ್ಪದವಾಗಿ 47 ಕೋಟಿ ರೂ ಹಣ ವರ್ಗಾವಣೆಯಾಗಿತ್ತು. ಆಗಸ್ಟ್ 7 ರಂದು ಈ ವರ್ಗಾವಣೆಗಳನ್ನ ಗಮನಿಸಿದ ಕಂಪನಿಯವರು ಕೂಡಲೇ ತಮ್ಮ ಖಾತೆ ಹೊಂದಿರುವ ಸಂಬಂಧಿತ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ, ಡೆಬಿಟ್ ಫ್ರೀಜ್ ಮಾಡಿಸಿದ್ದರು.

ಆಂತರಿಕ ತನಿಖೆ ನಡೆಸಿದಾಗ ಹಣ ವರ್ಗಾವಣೆಯಾದ ಖಾತೆಗಳು ಕಂಪನಿಯ ಕಡೆಯಿಂದ ವೇಟ್‌ಲಿಸ್ಟ್ ಮಾಡಲಾದ ಖಾತೆಗಳಲ್ಲ ಮತ್ತು ಅವುಗಳ ಐಪಿ ಅಡ್ರೆಸ್‌ಗಳು ವಿದೇಶಿ ಮೂಲದವು ಎಂದು ತಿಳಿದು ಬಂದಿತ್ತು. ಕೂಡಲೇ ಕಂಪನಿಯ ಹಿರಿಯ ವ್ಯವಸ್ಥಾಪಕರು ನೀಡಿದ ದೂರಿನನ್ವಯ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Central Crime Branch (CCB) Cyber Crime police have arrested two men for allegedly siphoning off ₹47 crore from a Bengaluru-based finance company by breaching its Application Programming Interface (API) gateway.