ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ ವಾಹನ ಚೋರನ ಬಂಧನ, ಕಳವುಗೈದ ಪಿಕಪ್‌ ವಾಹನ, ಬೈಕ್‌ ಪೊಲೀಸರ ವಶಕ್ಕೆ 

07-10-25 10:13 pm       Mangalore Correspondent   ಕ್ರೈಂ

ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಕಳವು ಆರೋಪಿಯೋರ್ವನನ್ನು ದಸ್ತಗಿರಿ ಮಾಡಿ ಪಿಕಪ್‌ ವಾಹನ ಹಾಗೂ ಬೈಕ್‌ನ್ನು ಸುರತ್ಕಲ್‌ ಪೊಲೀಸರು ವಶಪಡಿಸಿದ್ದಾರೆ. 

ಮಂಗಳೂರು, ಅ.7 : ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಕಳವು ಆರೋಪಿಯೋರ್ವನನ್ನು ದಸ್ತಗಿರಿ ಮಾಡಿ ಪಿಕಪ್‌ ವಾಹನ ಹಾಗೂ ಬೈಕ್‌ನ್ನು ಸುರತ್ಕಲ್‌ ಪೊಲೀಸರು ವಶಪಡಿಸಿದ್ದಾರೆ. 

ಸೆ.30ರಂದು ರಾತ್ರಿ ಸುಮಾರು 9 ಗಂಟೆಗೆ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಳಾಯಿಯ ಸುಕುಮಾರ್‌ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ KA-19-AE-8017 ನೇ ನಂಬ್ರದ ಪಿಕಪ್ ವಾಹನವನ್ನು ರಾತ್ರಿ 10 ಗಂಟೆಗೆ ನೋಡಿದಾಗ ಪಿಕಪ್‌ ವಾಹನವು ಇಲ್ಲದೇ ಇದ್ದು, ರಾತ್ರಿ ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆಂದು ಅ.3 ರಂದು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದ ಪೊಲೀಸರು ಅ.7ರಂದು ಬೈಕ್‌ವೊಂದರಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯನ್ನು ತಿರುವನಂತಪುರಂ ನಿವಾಸಿ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್(29) ಎಂದು ಗುರುತಿಸಲಾಗಿದೆ. ಆತ ಚಲಾಯಿಸುತ್ತಿದ್ದ ಬೈಕ್‌ಗೆ ಯಾವುದೇ ದಾಖಲಾತಿಗಳಿಲ್ಲದೇ ಇದ್ದು, ಬೈಕ್‌ನ್ನು ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯ ಫಾರಂ ಮಾಲ್‌ ಬಳಿಯಿಂದ ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವ್ಯಕ್ತಿ ಅ.30ರಂದು ಕುಳಾಯಿ ಬಳಿಯಿಂದ KA-19-AE-8017 ನೇ ನಂಬ್ರದ ಪಿಕಪ್ ವಾಹನವನ್ನು ಕಳವು ಮಾಡಿರುವುದು ತನಿಖೆಯಿಂದ ತಿಳಿದುಬಂದಿದ್ದು ಈ ಎರಡು ವಾಹನಗಳನ್ನು ಸ್ವಾಧೀನಪಡಿಸಲಾಗಿದೆ. ಸ್ವಾಧೀನಪಡಿಸಿಕೊಂಡ ವಾಹನಗಳ ಒಟ್ಟು ಮೊತ್ತ ರೂ. 3,10,000/- ಆಗಬಹುದು. 

ಆರೋಪಿ ಹಂಝ ಕುಪ್ಪಿಕಂಡ ಕುಖ್ಯಾತ ಕಳ್ಳತನ ಆರೋಪಿಯಾಗಿದ್ದು, ಈತನ ವಿರುದ್ಧ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್‌ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಸುರತ್ಕಲ್‌ ಪೊಲೀಸ್‌ ಠಾಣೆ ಪೊಲೀಸ್‌ ನಿರೀಕ್ಷಕ ಪ್ರಮೋದ್‌ ಕುಮಾರ್‌ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಶಿಧರ ಶೆಟ್ಟಿ, ಎಎಸ್‌ಐ ರಾಜೇಶ್‌ ಆಳ್ವ, ಸಿಬ್ಬಂದಿಯವರಾದ ಉಮೇಶ್‌, ವಿನೋದ್‌ ಕುಮಾರ್‌, ನಾಗರಾಜ್‌, ಸುನೀಲ್ ಕುಮಾರ್ ತನಿಖೆ ನಡೆಸಿರುತ್ತಾರೆ.

Police in Suratkal have arrested an interstate vehicle thief from Kerala and recovered a stolen pickup truck and motorbike in separate theft cases.