Mangalore Fake Documents, Crime, Arrest: ಸರ್ಕಾರಿ ಕಚೇರಿಗಳಿಗೆ, ಕೋರ್ಟಿಗೆ ನಕಲಿ ದಾಖಲೆ ಸಲ್ಲಿಸಿ ಮೋಸ ; ಆರೋಪಿಗಳಿಗೆ ಜಾಮೀನಿಗೂ ನಕಲಿ ಆರ್ ಟಿಸಿ, ಆಧಾರ್ ! ಜೆರಾಕ್ಸ್ ಅಂಗಡಿಗಳಲ್ಲೇ ಅಸಲಿ- ನಕಲಿ ಕರಾಮತ್ತು, ವಕೀಲರೇ ಶಾಮೀಲು, ಇಬ್ಬರು ಪೊಲೀಸ್ ಬಲೆಗೆ

11-09-25 08:52 pm       Mangalore Correspondent   ಕ್ರೈಂ

ಸಾಮಾನ್ಯವಾಗಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಕೋರ್ಟಿನಿಂದ ಜಾಮೀನು ಪಡೆಯಬೇಕಿದ್ದರೆ ಆರ್ ಟಿಸಿ ಇರುವ ವ್ಯಕ್ತಿಯದ್ದೇ ಜಾಮೀನು ಬೇಕಾಗುತ್ತದೆ.

ಮಂಗಳೂರು, ಸೆ.10 : ಸಾಮಾನ್ಯವಾಗಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಕೋರ್ಟಿನಿಂದ ಜಾಮೀನು ಪಡೆಯಬೇಕಿದ್ದರೆ ಆರ್ ಟಿಸಿ ಇರುವ ವ್ಯಕ್ತಿಯದ್ದೇ ಜಾಮೀನು ಬೇಕಾಗುತ್ತದೆ. ಆದರೆ ವ್ಯಕ್ತಿಯೊಬ್ಬ ಪದೇ ಪದೇ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಅಥವಾ ಆಸ್ತಿಪತ್ರ ಹೊಂದಿರುವ ಸಂಬಂಧಿಕರು ಜಾಮೀನು ನೀಡಲು ಬಾರದೇ ಇದ್ದರೆ ಅಂಥವರಿಗೆಂದೇ ನಕಲಿ ಆಧಾರ್ ಮತ್ತು ಆರ್ ಟಿಸಿಗಳನ್ನು ತಯಾರಿಸಿ ಕೋರ್ಟಿಗೆ ಸಲ್ಲಿಸಿ ಪೊಲೀಸರು ಮತ್ತು ನ್ಯಾಯಾಲಯವನ್ನೇ ಯಾಮಾರಿಸುವ ಜಾಲ ಮಂಗಳೂರಿನಲ್ಲಿ ಸಕ್ರಿಯವಾಗಿದೆ.

ನಕಲಿ ಆಧಾರ್, ಪಹಣಿ ಪತ್ರಗಳನ್ನು ಕೋರ್ಟಿಗೆ ಸಲ್ಲಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಉರ್ವಾ ಮತ್ತು ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಆದರೆ ಜಾಲದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳ ಪತ್ತೆ ಸುಲಭ ಇರಲಿಲ್ಲ. ಹೀಗಾಗಿ ಹಲವು ಸಮಯದಿಂದ ಹೊಂಚು ಹಾಕಿ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.

ಮುಲ್ಕಿ ಬಪ್ಪನಾಡು ಮೂಲದ ಅಬ್ದುಲ್ ರಹಿಮಾನ್ ಮತ್ತು ಮತ್ತು ನಿಶಾಂತ್ ಎಂಬಿಬ್ಬರನ್ನು ಸದ್ಯಕ್ಕೆ ಬಂಧಿಸಲಾಗಿದ್ದು, ಜಾಲದಲ್ಲಿ ವಕೀಲರು, ಜೆರಾಕ್ಸ್ ಅಂಗಡಿಯವರು ಸೇರಿದಂತೆ ಹಲವಾರು ಮಂದಿ ಸಕ್ರಿಯರಾಗಿದ್ದು ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಮಂಗಳೂರಿನ ಕೆಲವು ಜೆರಾಕ್ಸ್ ಅಂಗಡಿಗಳಿಗೆ ಅಸಲಿ ವ್ಯಕ್ತಿಗಳ ಆಧಾರ್ ಕಾರ್ಡ್ ಗಳನ್ನೇ ತೆಗೆದಿಟ್ಟು ಯಾಮಾರಿಸುವ ಕೆಲಸವೂ ಆಗುತ್ತಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.   

‌ಅಬ್ದುಲ್ ರಹಿಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ನಗರದ ಪಿವಿಎಸ್ ವೃತ್ತದ ಬಳಿಯ ಆನ್ಲೈನ್ ಕಂಪ್ಯೂಟರ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್ ಎಂಬಾತ ಕಂಪ್ಯೂಟರ್ ನಲ್ಲಿ ಆಧಾರ್ ಕಾರ್ಡ್, ಹೆಸರು, ಪೋನ್ ನಂಬರ್, ವಿಳಾಸ ಮತ್ತು ಫೋಟೋಗಳನ್ನು ಎಡಿಟ್ ಮಾಡಿ ಬೇರೆ ಬೇರೆ ಇಲಾಖೆಗಳಿಗೆ ಹಾಗು ನ್ಯಾಯಾಲಯದಲ್ಲಿ ಅಗತ್ಯವಿರುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳ ಬಳಿ ವ್ಯಾಸರಾಯ ಆಚಾರಿ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ (487693387559) ಪತ್ತೆಯಾಗಿದ್ದು, ಅದನ್ನು ಸ್ಕಾನ್ ಮಾಡಿ ನೋಡಿದಾಗ AADHAR: XXXX XXXX 0030  NAME: Dinakara  Adress: 3-54, Ashwath Katte House, Panjikal, Dakshina Kannada, 574211 ಎಂಬುದಾಗಿ ತೋರಿಸಿದೆ. ಇದೇ ರೀತಿ ಆಧಾರ್ ಕಾರ್ಡ್ ಗಳನ್ನು ಬೇರೆ ಬೇರೆಯವರ ಹೆಸರಿನಲ್ಲಿ ಎಡಿಟ್ ಮಾಡಿ ಆಧಾರ್ ಕಾರ್ಡ್ ಗಳನ್ನು ನಕಲಿಯಾಗಿಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

A major fake document racket operating in Mangaluru has come to light, where forged Aadhaar cards and RTC (Record of Rights, Tenancy, and Crops) documents were being used to secure bail in criminal cases and to deceive government offices and courts.