Naxalites in Koojimale, Woman Naxalite, Puttur: ಕೂಜಿಮಲೆ ಎಸ್ಟೇಟ್ ನಲ್ಲಿ ಶಂಕಿತ ನಕ್ಸಲ್ ಮಹಿಳೆ ಪ್ರತ್ಯಕ್ಷ ; ಎಎನ್ಎಫ್ ಶೋಧ ಕಾರ್ಯಾಚರಣೆ 

28-03-24 03:25 pm       Mangalore Correspondent   ಕರಾವಳಿ

ಕೊಡಗಿನ ಗಡಿಭಾಗ ಸುಳ್ಯ ತಾಲೂಕಿನ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್‌ ನಲ್ಲಿ ಮತ್ತೆ ಶಂಕಿತ ನಕ್ಸಲರ ಚಲನವಲನ ಕಂಡುಬಂದಿದೆ. ಅಪರಿಚಿತ ಮಹಿಳೆಯೊಬ್ಬರು ರಬ್ಬರ್ ಎಸ್ಟೇಟ್ ನಲ್ಲಿ ಕಾಣಿಸಿಕೊಂಡಿದ್ದು ನಕ್ಸಲ್ ನಿಗ್ರಹ ದಳಕ್ಕೆ ಮಾಹಿತಿ ನೀಡಲಾಗಿದೆ.

ಪುತ್ತೂರು, ಮಾ.28: ಕೊಡಗಿನ ಗಡಿಭಾಗ ಸುಳ್ಯ ತಾಲೂಕಿನ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್‌ ನಲ್ಲಿ ಮತ್ತೆ ಶಂಕಿತ ನಕ್ಸಲರ ಚಲನವಲನ ಕಂಡುಬಂದಿದೆ. ಅಪರಿಚಿತ ಮಹಿಳೆಯೊಬ್ಬರು ರಬ್ಬರ್ ಎಸ್ಟೇಟ್ ನಲ್ಲಿ ಕಾಣಿಸಿಕೊಂಡಿದ್ದು ನಕ್ಸಲ್ ನಿಗ್ರಹ ದಳಕ್ಕೆ ಮಾಹಿತಿ ನೀಡಲಾಗಿದೆ. 

ಕೂಜಿಮಲೆ ಎಸ್ಟೆಟ್ ಕೊಡಗು ಜಿಲ್ಲೆಯ ವ್ಯಾಪ್ತಿಗೆ ಸೇರಿದ್ದು ಬುಧವಾರ ಅಪರಾಹ್ನ ಅಪರಿಚಿತ ಮಹಿಳೆ ಎಸ್ಟೇಟಿನ ರಬ್ಬರ್‌ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬಂದಿ ನೋಡಿದ್ದಾರೆ. ಬಳಿಕ ನಕ್ಸಲ್‌ ನಿಗ್ರಹ ಪಡೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದು ಶೋಧ ನಡೆಸಿದ್ದಾರೆ. ಶಂಕಿತ ಮಹಿಳೆ ರಬ್ಬರ್‌ ತೋಟದಿಂದ ಅರಣ್ಯ ಭಾಗದತ್ತ ತೆರಳಿದ್ದಾಳೆ ಎನ್ನಲಾಗಿದೆ. 

ನಕ್ಸಲ್‌ ನಿಗ್ರಹ ಪಡೆಯ ಸಿಬಂದಿ ಕಳೆದ ಒಂದು ವಾರದಿಂದ ಐನೆಕಿದು, ಕೂಜಿಮಲೆ ಆಸುಪಾಸಿನಲ್ಲೇ ಶೋಧ ಕಾರ್ಯ ನಡೆಸುತ್ತಿದ್ದಾರೆ. ಶಂಕಿತ ಮಹಿಳೆ ಕಾಣಿಸಿಕೊಂಡ ಮಾಹಿತಿ ಲಭ್ಯವಾದ ಕೂಡಲೇ ಎಎನ್‌ಎಫ್‌ ತಂಡ ಎಸ್ಟೇಟ್‌ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ಆರಂಭಿಸಿದೆ. ಮಾರ್ಚ್ 16ರಂದು ನಾಲ್ವರು ಶಂಕಿತ ನಕ್ಸಲರು ಕೂಜಿಮಲೆ ಎಸ್ಟೇಟ್‌ ಬಳಿಯ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿ ಖರೀದಿಸಿ ಅರಣ್ಯದತ್ತ ತೆರಳಿದ್ದರು. ಆನಂತರ, ಮಾ.23ರಂದು ನಾಲ್ವರು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಭೇಟಿ ನೀಡಿ ಊಟ, ಆಹಾರ ಸಾಮಗ್ರಿ ಪಡೆದು ತೆರಳಿದ್ದರು. 

ಮಾ.27ರಂದು ಮತ್ತೆ ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದಾಳೆ. ಮಾ.18ರಿಂದ ವಿವಿಧೆಡೆ ನಕ್ಸಲ್‌ ನಿಗ್ರಹ ಪಡೆ ನಿರಂತರ ಶೋಧ ನಡೆಸುತ್ತಿದ್ರೂ ನಕ್ಸಲರ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ.

An unidentified woman was reportedly spotted multiple times in the Koojimale estate area on Wednesday, prompting a search amid suspicions that she may be affiliated with Naxalites.